ಚಫ್-
ಕಾರ್ವಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಹಕ್ಕಿ ಯೂರೋಪ್ ಮತ್ತು ನೈಖುತ್ಯ ಏಷ್ಯದ ಪರ್ವತಶ್ರೇಣಿಗಳ ಶಿಖರಗಳಲ್ಲಿ ವಾಸಿಸುತ್ತದೆ. ಕಾಗೆಗೆ ಹತ್ತಿರಸಂಬಂಧಿ. ಚಫ್ ಜಾತಿಯ ವೈಜ್ಞಾನಿಕ ಹೆಸರು ಪಿರೋಕೊರ್ಯಾಕ್ಸ್. ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಯೂರೋಪಿನ ಸಮುದ್ರತೀರದ ಪ್ರಪಾತಗಳಲ್ಲಿ ಕಾಣದೊರೆಯುವ ಸಾಮಾನ್ಯ ಚಫ್ (ಪಿರೋ ಕೊರ್ಯಾಕ್ಸ್ ಪಿರೋಕೊರ್ಯಾಕ್ಸ್), ಇನ್ನೊಂದು ಆಲ್ಪ್ಸ್ ಪರ್ವತಗಳಲ್ಲಿ ವಾಸಿಸುವ ಆಲ್ಪೈನ್ ಚಫ್ (ಪಿರೋಕೊರ್ಯಾಕ್ಸ್ ಗ್ಯ್ರಾಕ್ಯುಲಸ್) ಎರಡು ಬಗೆಯ ಕಾಗೆಯಂತೆಯೇ ಕಪ್ಪುಬಣ್ಣದವು. ಆದರೆ ಗಾತ್ರದಲ್ಲಿ ಮಾತ್ರ ಚಿಕ್ಕವು. ಚಫ್ ಕೊಕ್ಕೂ ಬೇರೆ ರೀತಿಯದು. ಇದು ತೆಳುವಾಗಿ ಚೂಪಾಗಿರುವುದಲ್ಲದೆ ಕೆಳಮುಖನಾಗಿ ಬಾಗಿದೆ. ಕೊಕ್ಕಿನ ಬಣ್ಣ ಸಾಮಾನ್ಯ ಚಫ್ ಹಕ್ಕಿಯಲ್ಲಿ ಕೆಂಪು ಮತ್ತು ಆಲ್ಪೈನ್ ಚಫ್ ಹಕ್ಕಿಯಲ್ಲಿ ಹಳದಿ. ತಮ್ಮ ಹಾರುವಿಕೆಯ ಸಾಮಥ್ರ್ಯದಿಂದ ಎರಡು ಬಗೆಗಳೂ ಆಗಸದ ದೊಂಬರು ಎನಿಸಿಕೊಂಡಿವೆ. ಒಂಟೊಂಟಿಯಾಗಿ ಇಲ್ಲವೇ ಗುಂಪುಗಳಲ್ಲಿ ತಾವು ವಾಸಿಸುವ ಪ್ರಪಾತಗಳ ಸುತ್ತ ಚಕ್ರಾಕಾರದಲ್ಲಿ ಸುತ್ತುವುದು, ಸರ್ರನೆ ಮೇಲೇರುವುದು, ರೆಕ್ಕೆಗಳನ್ನು ಮುಚ್ಚಿಕೊಂಡು ಥಟ್ಟನೆ ದುಮುಕಿ ಕೆಳಗಿಳಿಯುವುದು, ಲಾಗಹಾಕುವುದು ಮುಂತಾದವನ್ನೆಲ್ಲ ಮಾಡುತ್ತ ಹಾರಾಡುತ್ತವೆ. ಚಫ್‍ಗಳು ಕೀಟಾಹಾರಿಗಳು.

ಇವು ಪರ್ವತಳ ಬಂಡೆದೊಗರುಗಳಲ್ಲಿ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಮೊಟ್ಟೆಯಿಡುವ ಕಾಲ ಏಪ್ರಿಲ್-ಮೇ ತಿಂಗಳು, ಮೊಟ್ಟೆಗಳ ಸಂಖ್ಯೆ 3-6. ಮೊಟ್ಟೆಯೊಡೆದು ಹೊರಬರುವ ಮರಿಗಳೂ 35-40 ದಿವಸಗಳ ಅನಂತರ ತಾಯಿಯಿಂದ ಬೇರೆಯಾಗಿ ವಾಸಿಸತೊಡಗುತ್ತವೆ. ಚಫ್‍ಗಳ ಆಯಸ್ಸು ಸುಮಾರು 15 ವರ್ಷಗಳು.
(ಎಚ್.ಎಚ್.ಎಸ್.)

(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ